photo-2-tobacco-products-which-are-displayed-during-the-meet-to-show-the-compliance

ತಂಬಾಕು ಉತ್ಪನ್ನಗಳ ಮೇಲಿನ ಚಿತ್ರ ಸಹಿತ ಎಚ್ಚರಿಕೆಗಳ ಹಿಂದಿನ ವಾಸ್ತವಾಂಶಗಳನ್ನು ಸಮೀಕ್ಷೆ ಹೊರಹಾಕಿದೆ. ಹೊಸ ನಿಯಮಗಳಿಂದ ತಂಬಾಕು ಬೆಳೆಗಾರರ ಜೀವನಕ್ಕೆ ಧಕ್ಕೆಯಾಗಿಲ್ಲ.

ಬೆಂಗಳೂರು: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಭಾರತ ಸರ್ಕಾರವು 2016, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಭಾಗ ಚಿತ್ರಸಹಿತದ ಎಚ್ಚರಿಕೆಯನ್ನು ಕಡ್ಡಾಯಗೊಳಿಸಿರುವುದು ಉತ್ತಮ ಫಲಿತಾಂಶ ನೀಡುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಚಿತ್ರಸಹಿತ ಎಚ್ಚರಿಕೆಯ ಕುರಿತ ಇತ್ತೀಚಿನ ಸಮೀಕ್ಷೆಯು ಉತ್ತಮ ಸೂಚನೆಗಳನ್ನು ತೋರಿಸಿದೆ. ಕರ್ನಾಟಕದಲ್ಲಿ, ಗರಿಷ್ಠ ಸಂಖ್ಯೆಯ ಬ್ರಾಂಡ್‍ಗಳೊಂದಿಗೆ ಶೇ.70ರಷ್ಟು ಸಿಗರೇಟ್ ಉತ್ಪನ್ನಗಳು ಈಗಾಗಲೇ ಹೊಸ ಚಿತ್ರ ಸಹಿತ ಎಚ್ಚರಿಕೆ ನಿಯಮದ ಅನುಸರಣೆ ಮಾಡುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಇಲ್ಲಿ ಗಮನಿಸಬೇಕಾದ್ದೇನೆಂದರೆ, ಹೊಸ ನಿಯಮಗಳು, ಪ್ಯಾಕೇಜ್‍ನ ಪ್ರಧಾನ ಪ್ರದರ್ಶನ ಭಾಗದ ಕನಿಷ್ಠ ಶೇ.85ರಷ್ಟು ಆರೋಗ್ಯದ ಎಚ್ಚರಿಕೆಯಿಂದ ಆವರಿಸಿರಬೇಕು, ಇದರಲ್ಲಿ ಶೇ.60ರಷ್ಟ ಭಾಗ ಚಿತ್ರದೊಂದಿಗೆ ಆರೋಗ್ಯದ ಎಚ್ಚರಿಕೆ ಹೊಂದಿರಬೇಕು ಮತ್ತು ಶೇ.25 ಭಾಗ ಅಕ್ಷರದ ಮೂಲಕ ಆರೋಗ್ಯದ ಎಚ್ಚರಿಕೆ ಇರಬೇಕು. ಇದನ್ನು ಪ್ಯಾಕೇಜ್‍ನ ಮೇಲ್ತುದಿಯಲ್ಲಿ ಹಾಕಿರಬೇಕು ಎಂದು ನಿರ್ದಿಷ್ಟವಾಗಿ ಹೇಳಿವೆ. ವಾಲೆಂಟರಿ ಹೆಲ್ತ್ ಅಸೋಸಿಯೇಶನ್ ಆಫ್ ಇಂಡಿಯಾ (ವಿಎಚ್‍ಎಐ) ಮತ್ತು ಇತರೆ ಸಂಸ್ಥೆಗಳೊಂದಿಗೆ, ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಐಪಿಎಚ್), ಬೆಂಗಳೂರು  ಸಮೀಕ್ಷೆಯನ್ನು ನಡೆಸಿದೆ ಮತ್ತು ಶೇ.55ರಷ್ಟು ಧೂಮರಹಿತ ತಂಬಾಕು (ಜಗಿಯುವ ತಂಬಾಕು) ಪ್ಯಾಕ್‍ಗಳು ಹೊಸ ಚಿತ್ರಸಹಿತ ಎಚ್ಚರಿಕೆಗಳನ್ನು ನಿಯಮದಂತೆ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ ಮತ್ತು ಬೀಡಿ ಪ್ಯಾಕ್‍ಗಳಿಗೆ ಬಂದಾಗ ಈ ಅನುಸರಣೆ ಶೇ.12ರಷ್ಟಿರುವುದು ಕಂಡುಬಂದಿದೆ.

photo-1-votv-senthil-kumar-former-law-minister-suresh-kumar-minister-for-food-and-civil-supply-u-t-khader-freedom-fighter-h-s-doreswamy-released-the-findings-of-the-report

ಇದಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಆರೋಗ್ಯ ತಜ್ಞರು ಮತ್ತು ಸಮೀಕ್ಷಾ ಸಂಸ್ಥೆಗಳ ಸದಸ್ಯರು ವಿವಿಧ ಮಧ್ಯಸ್ಥಗಾರರ ಸಮ್ಮುಖದಲ್ಲಿ ಫಲಿತಾಂಶಗಳನ್ನು ಹಂಚಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಎಚ್.ಎಸ್.ದೊರೆಸ್ವಾಮಿರವರು ಮಾತನಾಡಿ, ಪ್ರತಿ ಮೂವರಲ್ಲಿ ಒಬ್ಬ ಭಾರತೀಯ ವಯಸ್ಕ ಒಂದಲ್ಲ ಒಂದು ರೀತಿಯ ತಂಬಾಕು ಉಪಯೋಗಿಸುತ್ತಿರುವುದು ಮತ್ತು ಭಾರತದಲ್ಲಿ ಪ್ರತಿ ವರ್ಷ ತಂಬಾಕು ಸಂಬಂಧಿ ಕಾಯಿಲೆಗಳಿಂದ 10 ಲಕ್ಷ ಮಂದಿ ಭಾರತೀಯರು ಸಾವನ್ನಪ್ಪುತ್ತಿರುವುದು ಬೇಸರದ ಸಂಗತಿ ಎಂದರು.  ಸಣ್ಣ ಹುಡುಗರು ಮತ್ತು ಅನಕ್ಷರಸ್ಥರು ಇಂತಹ ದೊಡ್ಡ  ಚಿತ್ರ ಸಹಿತ ಎಚ್ಚರಿಕೆಯ ಅನುಕೂಲ ಹೊಂದುತ್ತಾರೆ ಎಂದರು.

ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಶ್ರೀ ಯು.ಟಿ.ಖಾದರ್‍ರವರು ಮಾತನಾಡಿ, ಕಾಯಿಲೆ, ಊನತೆ ಮತ್ತು ಸಾವಿಗೆ ಕಾರಣವಾಗುವ ಈ ತಂಬಾಕು ಉತ್ಪನ್ನಗಳು, ಜನಸಾಮಾನ್ಯರ ಯಾವುದೇ ಉಪಯೋಗಕ್ಕೆ ಬಾರದ ಏಕೈಕ ಗ್ರಾಹಕ ಉತ್ಪನ್ನವಾಗಿದೆ. ದೊಡ್ಡ ಚಿತ್ರ ಸಹಿತ ಎಚ್ಚರಿಕೆಯು ಗ್ರಾಹಕರಿಗೆ ಆಯ್ಕೆಯ ಮಾಹಿತಿಯನ್ನು ನೀಡುವಲ್ಲಿ ನೆರವಾಗುತ್ತದೆ. ನಾವು ನಮ್ಮ ಭವಿಷ್ಯದ ಪೀಳಿಗೆಗಾಗಿ ಸ್ವಾಸ್ಥ್ಯ ಭಾರತವನ್ನು ಸೃಷ್ಟಿಸುವತ್ತ ಕಾರ್ಯನಿರ್ವಹಿಸಬೇಕಿದೆ ಎಂದರು.

ಮಾಜಿ ಕಾನೂನು ಸಚಿವರಾದ ಶ್ರೀ ಸುರೇಶ್ ಕುಮಾರ್‍ರವರು ಮಾತನಾಡಿ, ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಿಣಾಮಕಾರಿಯಾಗಿ ಶೇ.85 ಚಿತ್ರ ಸಹಿತ ತಂಬಾಕು ಉತ್ಪನ್ನಗಳ ಎಚ್ಚರಿಕೆಯನ್ನು ಅನುಷ್ಠಾನಗೊಳಿಸುತ್ತಿದೆ, ವಿಶೇಷವಾಗಿ ಭಾರತ ಆತಿಥ್ಯ  ವಹಿಸಿರುವ, ಮುಂಬರುವ ವಿಶ್ವ ಆರೋಗ್ಯ ಸಂಸ್ಥೆಯ COP7 ಸಮ್ಮೇಳನದ ಹಿನ್ನೆಲೆಯಲ್ಲಿ ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಭಾರತೀಯ ಕಿಸಾನ್ ಸಂಘದ ಶ್ರೀ.ಪುಟ್ಟಸ್ವಾಮಿ ಗೌಡ  ಮಾತನಾಡಿ “ನಮ್ಮ ದೇಶದಲ್ಲಿ ರೈತರನ್ನು ಅನ್ನದಾತರೆಂದು ಮತ್ತು ಕಾರ್ಮಿಕರನ್ನು ಕಾರ್ಯಶಕ್ತಿಯೆಂದು ಕರೆಯಲಾಗುತ್ತದೆ. ನಾವು ಅವರತ್ತ ಅತೀವ ಗೌರವ ಹೊಂದಿದ್ದೇವೆ. ಮತ್ತು ಅವರನ್ನು ರಕ್ಷಿಸಲು ಬದ್ಧರಾಗಿರುತ್ತೇವೆ. ಆದಾಗ್ಯೂ, ಇದಕ್ಕೆ ವಿರುದ್ಧವಾಗಿ ಕೆಲವು ರೈತರು ಮತ್ತು ಕಾರ್ಮಿಕರು ಅನೇಕ ಜನರ ಸಾವಿಗೆ ಕೊಡುಗೆ ನೀಡುತ್ತಾರೆ. ಕೆಲವು ಲಕ್ಷ ರೈತರು ಮತ್ತು ಕಾರ್ಮಿಕರು ಪ್ರತಿವರ್ಷ ದೇಶದಲ್ಲಿ ತಂಬಾಕಿನಿಂದಿ 10 ಲಕ್ಷಕ್ಕೂ ಅಧಿಕ ಸಾವು ಮತ್ತು ಕೋಟ್ಯಂತರ ಮಂದಿಯ ಕಾಯಿಲೆ ಮತ್ತು ರೋಗಕ್ಕೆ ಕೊಡುಗೆ ನೀಡುತ್ತಾರೆ. ಒಂದೆಡೆ, ತಂಬಾಕು ಬೆಳೆಗಾರರು ಮತ್ತು ಕಾರ್ಮಿಕರು ಬಳಲುವ ಸಂಗತಿಯು ಒಂದು ಪ್ರಮುಖ ಕಳವಳಕಾರಿಯಾಗಿದೆ; ಆದರೆ ಈಗಾಗಲೇ ಬವಣೆ ಪಡುತ್ತಿರುವ, ಹೃದಯಾಘಾತ, ಟಿಬಿಯಂತಹ ಶ್ವಾಸಕೋಶ ಸಮಸ್ಯೆಗಳು, ಕ್ಯಾನ್ಸರ್‍ನಿಂದಾಗಿ ಈಗಾಗಲೇ ಜೀವನ ಹಾಳಾಗಿರುವ ಲಕ್ಷಾಂತರ ರೋಗಿಗಳು ಮತ್ತು ಅವರ ಕುಟುಂಬದವರನ್ನು ನಿರ್ಲಕ್ಷಿಸುವುದು ನ್ಯಾಯಸಮ್ಮತವಲ್ಲ ಎಂದರು.

ಕರ್ನಾಟಕ ಕೃಷಿಕ ಸಂಘದ ಶ್ರೀ ಮಲ್ಲಿಕಾರ್ಜುನ್ ಜಕಾತಿ ಮಾತನಾಡಿ, “ನಮ್ಮ ರೈತ ಸೋದರ ಸೋದರಿಯರು ತಂಬಾಕು ಉದ್ಯಮದ ಸುಳ್ಳು ವಾದಗಳಿಗೆ ಬಲಿಯಾಗಬಾರದು. ಅಂತಾರಾಷ್ಟ್ರೀಯ ಅಧ್ಯಯನವು ಕೂಡಾ, ಅತ್ಯುತ್ತಮ ತಂಬಾಕು ನಿಯಂತ್ರಣ ಕ್ರಮಗಳನ್ನು ಅನುಷ್ಠಾನಗೊಳಿಸಿದ ಮೇಲು ಸಹ ತಂಬಾಕಿನ ಬೇಡಿಕೆಯ ಇಳಿಕೆಯು ತೀರಾ ನಿಧಾನಗತಿಯದ್ದಾಗಿರುತ್ತದೆ ಮತ್ತು ಇದು ತಕ್ಷಣದಲ್ಲಿ ರೈತರ ಬದುಕಿಗೆ ಹಾನಿ ಮಾಡುವುದಿಲ್ಲ ಎಂದು ತೋರಿಸಿವೆ.  ಮುಂದಿನ ದಿನಗಳಲ್ಲಿ ತಂಬಾಕು ಬೆಳೆಗಾರರು ಕ್ರಮೇಣವಾಗಿ ಸುರಕ್ಷಿತ ಪರ್ಯಾಯ ಜೀವನೋಪಾಯ/ಬೆಳೆಗಳಿಗೆ ವರ್ಗಾವಣೆಯಾಗಬಹುದಾಗಿದೆ” ಎಂದರು.

ಡಾ.ಯು.ಎಸ್.ವಿಶಾಲ್ ರಾವ್, ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣದ ಕುರಿತ ಉನ್ನತಾಧಿಕಾರ ಸಮಿತಿ ಸದಸ್ಯರು ಮಾತನಾಡಿ,  ಬೀಡಿ ಉದ್ಯಮಗಳು ಹೊಸ ನೀತಿಯನ್ನು ವಿರೋಧಿಸಿದ್ದವು. ಬೀಡಿ ಪ್ಯಾಕ್‍ಗಳ ಆಕಾರ ಈ ನಿಯಮವನ್ನು ಅನುಸರಿಸಲು ತುಸು ಸಂಕೀರ್ಣವಾಗಿರುವುದರಿಂದ ಬೀಡಿ ಪ್ಯಾಕ್‍ಗಳ ಮೇಲೆ ಮುದ್ರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. “ಆದಾಗ್ಯೂ ಶೇ.12ರಷ್ಟು ಅನುಸರಣೆಯು ಬೀಡಿ ಪ್ಯಾಕ್‍ಗಳ ಮೇಲೆ ಶೇ.85ರಷ್ಟು ಎಚ್ಚರಿಕೆ ಮುದ್ರಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿವೆ. ಹಾಗಾಗಿ ಬೇರೆ ಬೀಡಿ ಕಂಪನಿಗಳಿಗೆ ರಿಯಾಯ್ತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.

ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನ ಡಾ. ಪ್ರಗತಿ ಹೆಬ್ಬಾರ್ ಮಾತನಾಡಿ, “ಈ ಅಧ್ಯಯನದಲ್ಲಿ ಸಂಗ್ರಹಿಸಿದ ಡಾಟಾ ತೋರಿಸುವುದೇನೆಂದರೆ, ಬಹುತೇಕ ತಂಬಾಕು ಕಂಪನಿಗಳು ಹೇಳಿಕೊಂಡಿದ್ದಕ್ಕಿಂತ ವಿರುದ್ಧವಾಗಿ, ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಶೇ.85 ಎಚ್ಚರಿಕೆಯ ಮುದ್ರಣವು ಪ್ರಾಯೋಗ ಸಾಧ್ಯ ಎಂಬುದನ್ನು ನಿರೂಪಿಸಿವೆ. ಸಾಕ್ಷ್ಯವು ನಿರ್ವಿವಾದವಾಗಿದೆ ಮತ್ತು ತಂಬಾಕು ಉತ್ಪಾದಕರು ಸರ್ಕಾರದ ಕಡ್ಡಾಯ ಆದೇಶ ಅನುಸರಿಸಲು ಸಮರ್ಥರು ಎಂಬುದನ್ನು ತೋರಿಸಿದೆ. ಇದು ಚಿತ್ರ ಸಹಿತ “ಎಚ್ಚರಿಕೆ ಧೂಮಪಾನ ಗಂಟಲು /ಬಾಯಿ ಕ್ಯಾನ್ಸರ್‍ಗೆ ಕಾರಣವಾಗುತ್ತದೆ” ಎಂಬ ಅಕ್ಷರದ ಸಂದೇಶವನ್ನು ಪ್ಯಾಕ್‍ನ ಮೇಲ್ಭಾಗಲ್ಲಿ ಎರಡೂ ಬದಿಯಲ್ಲಿ ಹೊಂದಿರಬೇಕು; ಕನಿಷ್ಠ 3.5 ಸೆಂ.ಮೀ. ಅಗಲ ಮತ್ತು 4 ಸೆಂ.ಮೀ. ಎತ್ತರದೊಂದಿಗೆ, ಪ್ರಧಾನ ಪ್ರದರ್ಶನ ಭಾಗದ ಶೇ.85 ಅನ್ನು ಇನ್ನು ಒಳಗೊಂಡಿರಬೇಕು; ಸಂದೇಶವು ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾರತೀಯ ಭಾಷೆಯಲ್ಲಿರಬೇಕು ಮತ್ತು ಆರೋಗ್ಯ ಎಚ್ಚರಿಕೆಯು ಪ್ಯಾಕ್ ತೆರೆದಾಗ ಅಥವಾ ಸೀಲ್ ಮಾಡಿದಾಗ ಯಾವುದೇ ಕಾರಣಕ್ಕೂ ಮುಚ್ಚಬಾರದು” ಎಂದು ಅವರು ಹೊಸ ನಿಯಮವನ್ನು ವಿವರಿಸಿದರು.

ಆರೋಗ್ಯ ತಜ್ಞರು ಚಿತ್ರ ಸಹಿತ ಎಚ್ಚರಿಕೆಯ ನಡೆಯನ್ನು ಮತ್ತೊಮ್ಮೆ ಸ್ವಾಗತಿಸಿದರು ಮತ್ತು ಇದು ತಂಬಾಕಿನ ಬಳಕೆಯ ಹಾನಿಯ ಕುರಿತು ಜನರಲ್ಲಿ ತಿಳುವಳಿಕೆ ಮೂಡಿಸಲು ನೆರವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕ್ಯಾನ್ಸರ್‍ಗೆ ತುತ್ತಾಗಿ ಚೇತರಿಕೆ ಕಾಣುತ್ತಿರುವ ಹಾಗು change.org ನಲ್ಲಿ ಸರ್ಕಾರ ತೆಗುದುಕೊಂಡಿರುವ 85% ಚಿತ್ರ ಸಹಿತ ಎಚ್ಚರಿಕೆಯ ಮುದ್ರಣ ಕ್ರಮವನ್ನು ಅಭಿನಂದಿಸಿ ಅರ್ಜಿ ಸಲ್ಲಿಸಿರುವ ಶ್ರೀ ಸೇಂಥಿಲ್ ಕುಮಾರ್ ಮಾತನಾಡಿ “ಸಾರ್ವಜನಿಕರಿಂದ ಅರ್ಜಿಗೆ ವ್ಯಕ್ತವಾಗಿರುವ ಅಭೂತಪೂರ್ವ ಸಹಕಾರವನ್ನು ನೋಡಿ ಬಹಳ ಸಂತೋಷವಾಗಿದೆ. 10,000 ಕ್ಕೂ ಹೆಚ್ಚು ಜನ ನನ್ನ ಅರ್ಜಿಯನ್ನು ಬೆಂಬಲಿಸಿದ್ದಾರೆ.” ಎಂದರು. ಅಲ್ಲದೇ ಯಾವುದೇ ಕಾರಣಕ್ಕೂ ಸರ್ಕಾರ ತನ್ನ ನಿರ್ಧಾರ ಬದಲಾಯಿಸಬಾರದೆಂದು ಹಾಗು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ವಿನಂತಿಸಿದರು.

ರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಫಲಿತಾಂಶ:

ರಾಷ್ಟ್ರೀಯ ಮಟ್ಟದಲ್ಲೂ ಅನುಸರಣೆ ಮಟ್ಟ ಉತ್ತಮವಾಗಿರುವುದನ್ನು ಸಮೀಕ್ಷೆಯು ತೋರಿಸಿದೆ. ಶೇ.68ರಷ್ಟು ಸಿಗರೇಟ್ ಪ್ಯಾಕ್‍ಗಳು ಹೊಸ ನಿಯಮಕ್ಕೆ ಬದ್ಧವಾಗಿವೆ. ಧೂಮರಹಿತ ತಂಬಾಕು ಉತ್ಪನ್ನಗಳಲ್ಲಿ ಶೇ.48ರಷ್ಟು ಪ್ಯಾಕ್‍ಗಳು ಅನುಸರಣೆಯನ್ನು ತೋರಿಸಿವೆ ಮತ್ತು ಬೀಡಿ ಪ್ಯಾಕ್‍ಗಳು ಶೇ.16ರಷ್ಟು ಅನುಸರಣೆ ತೋರಿಸಿವೆ.

ಗಮನಿಸಿ: ಕರ್ನಾಟಕದಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ಚಿತ್ರಸಹಿತ ಎಚ್ಚರಿಕೆಯ ಅನುಸರಣೆಯ ಕುರಿತ ವಿಸ್ತೃತ ಅಂಕಿಅಂಶದ ವಿವರಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 

ಡಾ.ಯು.ಎಸ್.ವಿಶಾಲ್‍ರಾವ್, ಕ್ಯಾನ್ಸರ್ ರೋಗ ತಜ್ಞರು ಮತ್ತು ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯರು, 9739774949.