Photo 1

ಯುವ ಜೀವಗಳ ರಕ್ಷಣೆಗೆ ಯಾವುದೇ ವಿಶೇಷಣಗಳಿಲ್ಲದ ಸಾದಾ ಪ್ಯಾಕೇಟ್ ಜಾರಿಗೊಳಿಸುವಂತೆ ಆರೋಗ್ಯ ತಜ್ಞರ ಒಕ್ಕೊರಲ ಆಗ್ರಹ

ಬೆಂಗಳೂರು, ಮೇ 27, 2016: ಕರ್ನಾಟಕ ಸರ್ಕಾರ ಮತ್ತು ಸಂಘಸಂಸ್ಥೆಗಳು ರಾಜ್ಯದ ಸಾರ್ವಜನಿಕ ಆರೋಗ್ಯ ಕಾಪಾಡುವ ಮೂಲಕ ಸಾವಿರಾರು ಯುವಕರ ಪ್ರಾಣ ಉಳಿಸಲು ಪಣ ತೊಟ್ಟಿದ್ದಾರೆ. ಈ ಗುರಿಯನ್ನು ತಲುಪಲು ತಂಬಾಕು ಉತ್ಪನ್ನಗಳ ಪ್ಯಾಕೇಟ್‍ಗಳ ಮೇಲೆ ಶೇ. 85 ರಷ್ಟು ಚಿತ್ರಸಹಿತವಾದ ಎಚ್ಚರಿಕೆ ಸಂದೇಶವನ್ನು ಕಡ್ಡಾಯವಾಗಿ ಮುದ್ರಿಸುವ ಕಾನೂನನ್ನು ಕಟ್ಟುನಿಟ್ಟಾಗಿ ತರಬೇಕಾಗಿದೆ. ಈ ಮೂಲಕ ಯುವ ಪೀಳಿಗೆಯನ್ನು ತಂಬಾಕಿನಂತಹ ಮಾರಣಾಂತಿಕ ಪದಾರ್ಥದಿಂದ ದೂರ ಸರಿಯುವಂತೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಮೇ 31, 2016 ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲು ಆರೋಗ್ಯ ಕ್ಷೇತ್ರದ ತಜ್ಞರು ಮತ್ತು ಇತರೆ ಸಂಘಸಂಸ್ಥೆಗಳ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಂಬಾಕು ಮುಕ್ತ ಕರ್ನಾಟಕ ನಿರ್ಮಾಣ ಒಕ್ಕೂಟ(ಸಿಎಫ್‍ಟಿಎಫ್‍ಕೆ) ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಕ್ಷೇತ್ರದ ತಜ್ಞರು, ತಂಬಾಕು ನಿಯಂತ್ರಣ ಸಲಹಾ ಸಮಿತಿಯ ಸದಸ್ಯರು ಈ ವರ್ಷದ ತಂಬಾಕು ರಹಿತ ದಿನವನ್ನು `ಯಾವದೇ ವಿಶೇಷಣಗಳಿಲ್ಲದ ಶೇ. 85 ರಷ್ಟು ಚಿತ್ರಸಹಿತವಾದ ಎಚ್ಚರಿಕೆ ಸಂದೇಶವನ್ನು ಹೊಂದಿರುವ ಸಾದಾ ಪ್ಯಾಕೇಜ್‍ಗಳಿಗೆ ಸಿದ್ಧರಾಗಿ’ ಎಂಬ ಧ್ಯೇಯವಾಕ್ಯದೊಂದಿಗೆ ತಂಬಾಕು ನಿರ್ಮೂಲನೆಗೆ ಒತ್ತುಕೊಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷಣಗಳಿಲ್ಲದ ಪ್ಯಾಕೇಜ್ ಅಂದರೆ, ಯಾವುದೇ ತಂಬಾಕು ಉತ್ಪನ್ನಗಳ ಪ್ಯಾಕೇಟ್‍ಗಳ ಮೇಲೆ ಕಂಪನಿಯ ಲೋಗೋ ಬಳಕೆ ನಿಷೇಧ, ವರ್ಣರಂಜಿತ ಚಿತ್ರಗಳ ನಿಷೇಧ, ಉತ್ಪನ್ನವನ್ನು ಉತ್ತೇಜಿಸುವಂತಹ ಯಾವುದೇ ಮಾಹಿಯಿತಿಯನ್ನು ಒಳಗೊಂಡಿರಬಾರದು. ಆದರೆ, ಕಾನೂನಿನಂತೆ ಬ್ರಾಂಡ್ ಹೆಸರು ಮತ್ತು ನಿಗದಿತ ಬಣ್ಣದಲ್ಲಿ ಉತ್ಪನ್ನದ ಹೆಸರಿರಬೇಕು.

ಈ ಸಂದರ್ಭದಲ್ಲಿ ಮಾತನಾಡಿದ ತಂಬಾಕು ನಿಯಂತ್ರಣಕ್ಕಾಗಿ ರಚಿಸಿರುವ ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ಸದಸ್ಯರೂ ಆಗಿರುವ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್‍ರಾವ್ ಅವರು, ತಂಬಾಕು ಉತ್ಪನ್ನಗಳ ಉತ್ತೇಜನಕ್ಕೆ ತಂಬಾಕು  ಕಂಪನಿಗಳು ನೀಡುವ ಜಾಹೀರಾತುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಸೋದಾಹರಣವಾಗಿ ತಿಳಿಸಿದರು.

“ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಮತ್ತು ಪರೋಕ್ಷ ಜಾಹೀರಾತನ್ನು ನಿಷೇಧಿಸಲಾಗಿದೆ. ಆದರೆ, ತಂಬಾಕು ಕಂಪನಿಗಳು ಉತ್ಪನ್ನಗಳ ಪ್ಯಾಕೇಟ್‍ಗಳನ್ನು ಜಾಹೀರಾತಿಗಾಗಿ ಬಳಸಿಕೊಳ್ಳುತ್ತಿವೆ. ತಂಬಾಕು ಉತ್ಪನ್ನಗಳ ಬೇಡಿಕೆಯನ್ನು ಇಳಿಕೆ ಮಾಡುವಲ್ಲಿ ಚಿತ್ರಸಹಿತವಾದ ಎಚ್ಚರಿಕೆ ಸಂದೇಶ ಪರಿಣಾಮಕಾರಿಯಾಗುತ್ತದೆ’’ ಎಂದರು.

ಸೊಸೈಟಿ ಫಾರ್ ಕಮ್ಯುನಿಟಿ ಹೆಲ್ತ್ ಅವೇರ್‍ನೆಸ್ ರೀಸರ್ಚ್ ಅಂಡ್ ಆ್ಯಕ್ಷನ್(ಸೋಚಾರ) ನ ಕಾರ್ಯಕ್ರಮ ಅಧಿಕಾರಿ ಡಾ.ಚಂದರ್ ಅವರು ಮಾತನಾಡಿ, “ಅನಕ್ಷರಸ್ಥರು ಮತ್ತು ಬಹುತೇಕ ಯುವಕರು ತಂಬಾಕಿನಿಂದ ಆಗುವ ದುಷ್ಪರಿಣಾಮಗಳನ್ನು ಕಡೆಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೇಟ್‍ಗಳ ಮೇಲೆ ಶೇ. 85 ರಷ್ಟು ಜಾಗದಲ್ಲಿ ಚಿತ್ರಸಹಿತವಾದ ಎಚ್ಚರಿಕೆ ಸಂದೇಶವನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸುವುದರ ಜತೆಗೆ ಉತ್ಪನ್ನಗಳ ಉತ್ತೇಜನಕ್ಕೆ ಕಡಿವಾಣ ಹಾಕುವ ಅಗತ್ಯತೆ ಇದೀಗ ಬಂದೊದಗಿದೆ. ಹೀಗೆ ಮಾಡಿದರೆ ಬಹಳಷ್ಟು ಜನಸಂಖ್ಯೆ ತಂಬಾಕು ಉದ್ಯಮದ ಸುಲಿಗೆಯಿಂದ ತಪ್ಪಿಸಿಕೊಂಡಂತಾಗುತ್ತದೆ’’ ಎಂದು ಅಭಿಪ್ರಾಯಪಟ್ಟರು.

ರಾಜೀವ್‍ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಡಾ.ರಿಯಾಜ್‍ಬಾಷ ಅವರು ಮಾತನಾಡಿ, ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ತಂಬಾಕಿಗೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಫ್ರೇಂವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೋ ಕಂಟ್ರೋಲ್(ಎಫ್‍ಸಿಟಿಸಿ) ಒಪ್ಪಂದಕ್ಕೂ ಸಹಿ ಹಾಕಿದೆ. ಇದರ ಪರಿಣಾಮ 180 ದೇಶಗಳು ಎಫ್‍ಸಿಟಿಸಿಗೆ ಸಮ್ಮತಿ ಸೂಚಿಸಿವೆ. ಹೀಗೆ ಸಮ್ಮತಿ ಸೂಚಿಸಿ ರಾಷ್ಟ್ರಗಳ ಪೈಕಿ ಭಾರತ ಏಳನೇಯದ್ದು. ಭಾರತ 2004 ರ ಫೆಬ್ರವರಿಯಲ್ಲಿ ಈ ಎಫ್‍ಸಿಟಿಸಿಯನ್ನು ಅನುಮೋದಿಸಿತ್ತು. ಈ ಎಫ್‍ಸಿಟಿಸಿಯ 13 ನೇ ಕಾಯ್ದೆ ಪ್ರಕಾರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಂಬಾಕು ಉತ್ಪನ್ನಗಳ ಜಾಹೀರಾತಿಗೆ ನಿಷೇಧ. ಅದೇರೀತಿ ಈ ಉದ್ಯಮದ ಕಂಪನಿಗಳು ತಮ್ಮ ಉತ್ಪನ್ನಗಳ ಉತ್ತೇಜನ ಮತ್ತು ಪ್ರಾಯೋಜಕತ್ವವನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ಸಹಾಯಕ ನಿರ್ದೇಶಕರಾದ ಡಾ.ಉಪೇಂದ್ರ ಭೋಜಾನಿ ಅವರು ಮಾತನಾಡಿ, ತಂಬಾಕು ನಿಯಂತ್ರಣ ವಿಚಾರದಲ್ಲಿ ತಂಬಾಕು ಉದ್ಯಮ ಮೂಗು ತೂರಿಸುತ್ತಿದೆ ಎಂದು ದೂರಿದರು.

“ಇದುವರೆಗೆ 77 ದೇಶಗಳು ಚಿತ್ರಸಹಿತವಾದ ಎಚ್ಚರಿಕೆ ಸಂದೇಶಗಳನ್ನು ಮುದ್ರಿಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತಂದಿವೆ. ಈ ಪೈಕಿ 11 ದೇಶಗಳು ಶೇ.65 ರಷ್ಟು ಜಾಗದಲ್ಲಿ ಈ ಚಿತ್ರಸಹಿತ ಸಂದೇಶದ ಕಾನೂನನ್ನು ಅನುಷ್ಠಾನಗೊಳಿಸಿವೆ. ಥೈಲ್ಯಾಂಡ್‍ನಲ್ಲಿ ಶೇ. 85 ರಷ್ಟು ಎಚ್ಚರಿಕೆ ಸಂದೇಶದ ಕಾನೂನು ಜಾರಿಯಲ್ಲಿದೆ. ಇಲ್ಲಿ ಭಾರತದಲ್ಲಿ ತಂಬಾಕು ನಿಯಂತ್ರಣ ವಿಚಾರದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶದ ಗಾತ್ರವನ್ನು ಹೆಚ್ಚಿಸಲು ಉತ್ಸುಕತೆ ತೋರುತ್ತಿದೆ. ಆದರೆ, ಇದನ್ನು ವಿರೋಧಿಸುವ ಸಲುವಾಗಿಯೇ ತಂಬಾಕು ಉದ್ಯಮ ಹಲವಾರು ಕುತಂತ್ರಗಳನ್ನು ನಡೆಸುತ್ತಿದೆ. ಒಂದು ವೇಳೆ ಶೇ.85 ರಷ್ಟು ಜಾಗದಲ್ಲಿ ಎಚ್ಚರಿಕೆ ಸಂದೇಶ ಮುದ್ರಿಸಿದ್ದೇ ಆದಲ್ಲಿ ತಂಬಾಕು ಉತ್ಪನ್ನದ ಬೇಡಿಕೆ ಕಡಿಮೆಯಾಗುತ್ತದೆ ಎಂಬುದನ್ನು ಆ ಉದ್ಯಮ ಅರಿತಿದೆ. ಈ ಕಾರಣದಿಂದಲೇ ಈ ಕಾನೂನಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಿಎಫ್‍ಟಿಎಫ್‍ಕೆ ಪ್ರತಿನಿಧಿಗಳು ಕಳೆದ ಒಂದು ವರ್ಷದಲ್ಲಿ ತಂಬಾಕು ನಿಯಂತ್ರಣ ಚಟುವಟಿಕೆಗಳ ಮಾಹಿತಿಗಳನ್ನು ಹಂಚಿಕೊಂಡರು. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕೋಟ್ಪಾ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು, ತಂಬಾಕು ಮುಕ್ತ ವಾತಾವರಣ ನಿರ್ಮಾಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ, ಐಟಿಬಿಟಿ ಕಂಪನಿಗಳು ಕೈಜೋಡಿಸಿರುವುದು, ಕೋಟ್ಪಾ ಕಾಯ್ದೆಯ ಜಾರಿ ಕುರಿತಂತೆ ಪೊಲೀಸರಿಗೆ ನೀಡಿರುವ ತರಬೇತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.