ಬೆಂಗಳೂರು: ಇತ್ತೀಚೆಗೆ ಸಂಭವಿಸುತ್ತಿರುವ ರಸ್ತೆ ಅಪಘಾತದಲ್ಲಿ ಯುವಕರು ಹೆಚ್ಚು ದುರ್ಮರಣವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜರೂರಾಗಿ ಎಚ್ಚೆತ್ತುಕೊಳ್ಳಬೇಕಿದೆ. ಹೀಗೆ ಸಾವನ್ನಪ್ಪುವ ಲಕ್ಷಾಂತರ ಜೀವಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಕಠಿಣ ಕಾಯ್ದೆಯನ್ನು ರೂಪಿಸಿ ಅದನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಹೀಗೆ ಹಲವು ವಿಧದಲ್ಲಿ ಬೇಡಿಕೆ ಇಟ್ಟವರು ಮಕ್ಕಳ ಹಕ್ಕು ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರು. ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ತಜ್ಞರು ಅಪಘಾತದಲ್ಲಿ ಸಾವನ್ನಪ್ಪುವ ಮಕ್ಕಳು ಮತ್ತು ಯುವಕರು ಸೇರಿದಂತೆ ಅಮಾಯಕರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ರೆಡ್‍ಕ್ರಾಸ್ ಸೊಸೈಟಿ, ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸ್ವಯಂಸೇವಾ ಸಂಸ್ಥೆ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್(ಐಪಿಎಚ್)ನ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಕೆಎಸ್‍ಸಿಪಿಸಿಆರ್) ಆಯೋಜಿಸಿದ್ದ ಈ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪರಿಣಿತರು, ಭಾರತದಲ್ಲಿ ಅಪಘಾತಗಳಿಂದ ಪ್ರತಿದಿನ 20 ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆಎಸ್‍ಸಿಪಿಸಿಆರ್ ಅಧ್ಯಕ್ಷೆ ಡಾ.ಕೃಪಾ ಆಳ್ವ ಮಾತನಾಡಿ, ದೇಶದಲ್ಲಿ ಅಪಘಾತಗಳಲ್ಲಿ ಹೆಚ್ಚು ಸಾವನ್ನಪ್ಪುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಇದರ ಜತೆಗೆ ಅಪಘಾತಗಳಿಂದ ಅಮಾಯಕ ಮಕ್ಕಳು ದುರ್ಮರಣಕ್ಕೀಡಾಗುತ್ತಿರುವ ಪ್ರಮಾಣವೂ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

“ಆದರೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಠಿಣವಾದ ಕಾನೂನುಗಳನ್ನು ಜಾರಿಗೆ ತಂದಾಗ ಮಾತ್ರ ಈ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ. ಈ ಮೂಲಕ ಮಕ್ಕಳನ್ನು ಮತ್ತು ದೇಶದ ಪ್ರಗತಿಗಾಗಿ ದುಡಿಯುತ್ತಿರುವ ಯುವಕ/ಯುವತಿಯರನ್ನು ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಯುವಕರ ಜೀವ ಉಳಿವಿಗಾಗಿ ಕೇಂದ್ರ ಸರ್ಕಾರ ಕಠಿಣವಾದ ರಸ್ತೆ ಸುರಕ್ಷತಾ ಕಾನೂನುಗಳನ್ನು ಜಾರಿಗೆ ತರಬೇಕೆಂದು ನಾನು ಆಗ್ರಹಿಸುತ್ತಿದ್ದೇನೆ’’ ಎಂದರು.

ಐಪಿಎಚ್‍ನ ಅಡ್ವೊಕೆಸಿ ಆಫೀಸರ್ ಡಾ.ಪ್ರಗತಿ ಹೆಬ್ಬಾರ್ ಮಾತನಾಡಿ, ಕಳೆದ ಒಂದು ದಶಕದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 1 ದಶಲಕ್ಷ ಜನರು ದುರ್ಮರಣವನ್ನಪ್ಪಿದ್ದರೆ, 5 ದಶಲಕ್ಷಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಮತ್ತು ವಿಕಲಚೇತನರಾಗಿದ್ದಾರೆ. ಪ್ರಸ್ತುತ ರಸ್ತೆ ಅಪಘಾತಗಳು ಮತ್ತು ಅವುಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ ಇದು ಎಚ್ಚರಿಕೆ ಗಂಟೆ ಎನಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಬಲ್ಲಂತಹ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅನೇಕ ಮುಗ್ಧ ಜೀವಗಳನ್ನು ಉಳಿಸುವುದು ಈಗಿನ ಅಗತ್ಯವಾಗಿದೆ. ಈ ರಸ್ತೆ ಅಪಘಾತಗಳಿಂದಾಗಿ ದೇಶದ ಜಿಡಿಪಿಗೆ ಶೇ. 3 ರಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿವರಿಸಿದರು.

ರೆಡ್‍ಕ್ರಾಸ್ ಕರ್ನಾಟಕ ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಅಶೋಕ್‍ಕುಮಾರ್ ಶೆಟ್ಟಿ ಅವರು, ಹರೀಶ್ ಯೋಜನೆ, ಬೈಕ್ ಆ್ಯಂಬ್ಯುಲೆನ್ಸ್, ರಾಜ್ಯ ರಸ್ತೆ ಸುರಕ್ಷಾ ನೀತಿ, ದ್ವಿಚಕ್ರ ವಾಹನದ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ ಮಾಡಿರುವುದು, ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ಕೂಡಲೇ ವೈದ್ಯಕೀಯ ಸೇವೆ ಒದಗಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ರಸ್ತೆ ಸುರಕ್ಷತಾ ನೀತಿಯನ್ನು ಜಾರಿಗೆ ತರುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರುವ ಕಾನೂನಿಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಮಾಹಿತಿ ನೀಡಿದರು.

ಖ್ಯಾತ ಮೂಳೆರೋಗ ತಜ್ಞರಾದ ಡಾ.ಸುಬೋಧ್ ಶೆಟ್ಟಿ ಅವರು, ಇಂತಹ ರಾಷ್ಟ್ರೀಯ ಕಾನೂನುಗಳು ಜರೂರಾಗಿ ಆಗಬೇಕಾದ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಕಾನೂನು ರೂಪಿಸುವವರು ಮತ್ತು ಜಾರಿಗೆ ತರುವವರು ಗಂಭೀರ ಪ್ರಯತ್ನ ಮಾಡಬೇಕಾಗಿದೆ. ಅಲ್ಲದೇ, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ಸಾರಿಗೆ ಸಚಿವರ ಸಭೆಯಲ್ಲಿ ಕಠಿಣ ಕಾನೂನುಗಳನ್ನು ರೂಪಿಸುವ ಬಗ್ಗೆ ಒತ್ತು ನೀಡಬೇಕಾಗಿದೆ ಎಂದರು.

ರಸ್ತೆ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಈ ತಜ್ಞರು ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಸುರಕ್ಷತಾ ನೀತಿಗಳನ್ನು ಅವಲೋಕನ ಮಾಡಲು ರಚಿಸಲಾಗಿರುವ ಮಂತ್ರಿಗಳ ಸಮಿತಿಯ ಅಧ್ಯಕ್ಷ ಯೂನಸ್ ಖಾನ್ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

Inline images 1

Inline images 2

Inline images 3
Advertisements