ತಮಿಳುನಾಡು ರಾಜ್ಯದಲ್ಲಿ ಕನ್ನಡ, ತೆಲುಗು, ಮಳಯಾಳಂ ಮತ್ತಿತರೆ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಲಕ್ಷಾಂತರ ಭಾಷಾ ಅಲ್ಪಸಂಖ್ಯಾತರ ಕುಟುಂಬಗಳು ವಾಸವಾಗಿವೆ. ಇತ್ತೀಚಿನ ಕೆಲ ವರ್ಷಗಳ ವರೆಗೆ ಅವರ ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ಸರ್ಕಾರದಿಂದ ಆಯಾ ಭಾಷೆಗಳನ್ನಾಡುವ ಜನರು ಹೆಚ್ಚಾಗಿ ವಾಸಮಾಡುವ ಜಾಗಗಳಲ್ಲಿ ಆಯಾ ಭಾಷೆಯ ಶಾಲೆಗಳನ್ನು ನಡೆಸಲಾಗುತ್ತಿತ್ತು. ಈ ಹಿಂದಿನ ಮುಖ್ಯಮಂತ್ರಿ ಕರುಣಾನಿಧಿ ಅವರ ನೇತೃತ್ವದ ಸರ್ಕಾರವು ಕಡ್ಡಾಯ ತಮಿಳು ಶಿಕ್ಷಣ ಕಾಯಿದೆಯನ್ನು ಜಾರಿಗೆ ತರುವುದರ ಮುಖಾಂತರ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಅನ್ಯಾಯವನ್ನು ಎಸಗಿತ್ತು. ಆ ಕಾಯಿದೆಯನ್ನು ರದ್ದುಗೊಳಿಸಿ ಈ ಹಿಂದಿನಂತೆ ಅವರವರ ಮಾತೃಭಾಷೆಯಲ್ಲಿ ಕಲಿಯುವ ಸವಲತ್ತು ಕಲ್ಪಿಸಬೇಕೆಂದು ಒತ್ತಾಯಿಸಿ ಕೇತಿರೆಡ್ಡಿ ಜಗದೀಶ್ವರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತಮಿಳುನಾಡು ತೆಲುಗು ಯುವಶಕ್ತಿ ವೇದಿಕೆಯು ಹಲವಾರು ಹೋರಾಟಗಳನ್ನು ನಡೆಸಿದೆ.

ಈ ಕುರಿತಂತೆ ಈಗಿನ ಮುಖ್ಯಮಂತ್ರಿ ಕುಮಾರಿ ಜಯಲಲಿತಾ, ರಾಜ್ಯಪಾಲ ಕೆ.ರೋಶಯ್ಯ ಸೇರಿದಂತೆ ಹಲವಾರು ರಾಜ್ಯ, ರಾಷ್ಟಮಟ್ಟದ ಮುಖಂಡರಲ್ಲಿ ಮನವಿ ಮಾಡಿಕೊಂಡಿದೆ. ಆದರೆ ಇವಾವುದಕ್ಕೆ ಕಿವಿಗೊಡದ ಸರ್ಕಾರ ಕಡ್ಡಾಯ ತಮಿಳು ಶಿಕ್ಷಣ ಕಾಯಿದೆಯನ್ನು ಜಾರಿಗೊಳಿಸುತ್ತಾ ಭಾಷಾ ಅಲ್ಪಸಂಖ್ಯಾತರ ವಿರುದ್ಧ ದಬ್ಬಾಳಿಕೆ ಮಾಡುತ್ತಿದೆ. ಅಲ್ಲದೆ ತಮಿಳು ಹೊರತುಪಡಿಸಿ ಇತರೆ ಭಾಷೆಗಳನ್ನು ಮಾತನಾಡುವ ಜನರು ವಾಸಮಾಡುವ ಪ್ರದೇಶಗಳ ಅಭಿವೃದ್ಧಿಯನ್ನು ಕಡೆಗಣಿಸುತ್ತಾ, ಕನಿಷ್ಟ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಸಾರಿಗೆ, ವಿದ್ಯುತ್ತು ಮೊದಲಾದುವನ್ನು ನೀಡುವುದರಲ್ಲಿಯೂ ಪಕ್ಷಪಾತವನ್ನು ಮಾಡುತ್ತಿದೆ.

ತಮಿಳುನಾಡು ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಇದೀಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಸ್ಪರ್ಧೆಮಾಡುತ್ತಿರುವ ಚೆನ್ನೈ ನಗರದ ಆರ್.ಕೆ.ನಗರ್ ಮತ್ತು ಕನ್ನಡ, ತೆಲುಗು ಭಾಷಿಗರು ಹೆಚ್ಚಾಗಿರುವ ಬೆಂಗಳೂರಿಗೆ ಅಂಟಿಕೊಂಡಂತಿರುವ ಹೊಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ತಮಿಳುನಾಡು ತೆಲುಗು ಯುವಶಕ್ತಿ ವೇದಿಕೆಯ ಅಧ್ಯಕ್ಷರಾದ ಕೇತಿರೆಡ್ಡಿ ಜಗದೀಶ್ವರ ರೆಡ್ಡಿಯವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ದಾಖಲಿಸಿ ಕಣಕ್ಕಿಳಿದಿದ್ದಾರೆ.

jagadishwar reddy(centre)

ಚುನಾವಣಾ ಭಿತ್ತಿಪತ್ರವನ್ನು ಬಿಡುಗಡೆ ಮಾಡುತ್ತಿರುವ ಜಗದೀಶ್ವರ ರೆಡ್ಡಿ ಮತ್ತಿತರರು.

ಬೆಂಗಳೂರು ನಗರದ ಪ್ರೆಸ್‍ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೆ. ಜಗದೀಶ್ವರ ರೆಡ್ಡಿಯವರು, “ ಭಾಷಾ ಅಲ್ಪ ಸಂಖ್ಯಾತರ ಹಿತರಕ್ಷಣೆಯ ದೃಷ್ಟಿಯಿಂದ ಈ ಹಿಂದೆ ನಡೆದ ಹಲವಾರು ಚುನಾವಣೆಗಳಲ್ಲಿ ನಾನು ಜಯಲಲಿತಾ ಅವರ ಪರವಾಗಿ ಶ್ರಮವಹಿಸಿ ಪ್ರಚಾರವನ್ನು ಮಾಡಿದ್ದೇನೆ. ಅಲ್ಲದೆ ಅವರು ಅಕ್ರಮ ಆಸ್ತಿಗಳಿಗೆ ಆರೋಪದಲ್ಲಿ ಜೈಲಿಗೆ ಹೋದಾಗ, ಆವರ ಬಿಡುಗಡೆಗಾಗಿ ಪ್ರಾರ್ಥಿಸಿ ಅದೆಷ್ಟೋ ಹೋಮ ಹವನಗಳು, ದೇವಾಲಯಗಳಲ್ಲಿ ಪೂಜೆಗಳನ್ನು ಮಾಡಿದ್ದೇನೆ. ಕಡ್ಡಾಯ ತಮಿಳು ಶಿಕ್ಷಣ ಕಾಯಿದೆಯಿಂದ ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಕುರಿತು ಹಲವು ಬಾರಿ ಮನವಿ ಪತ್ರ ಸಲ್ಲಿಸಿ, ಆ ಮಕ್ಕಳ ಹಕ್ಕನ್ನು ಕಸಿಯುತ್ತಿರುವ ಸದರಿ ಕಾಯಿದೆಯನ್ನು ರದ್ದುಗೊಳಿಸ ಬೇಕೆಂದು ವಿನಂತಿಸಿಕೊಂಡಿದ್ದೇನೆ.ಆದರೆ ಅವರು ತಮ್ಮ ಈ ಮನವಿಗಳಿಗೆ ಕಿವಿಗೊಡದಿದ್ದಾಗ ಚೆನ್ನೈ, ಹೊಸೂರು ಮತ್ತಿತರ ಹಲವು ಕಡೆಗಳಲ್ಲಿ ಭಾಷಾ ಅಲ್ಪ ಸಂಖ್ಯಾತರ ಭಾರೀ ಪ್ರತಿಭಟನೆಗಳನ್ನು ಆಯೋಜಿಸಿ ಆ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನವನ್ನು ಮಾಡಿರುತ್ತೇನೆ” ಎಂದು ತಿಳಿಸಿದರು.

“ಜಯಲಲಿತಾ ಅವರ ನೇತೃತ್ವದ ಸರ್ಕಾರವು ಈ ಎಲ್ಲ ಹೋರಾಟಗಳಿಗೆ ಜಗ್ಗದೆ ಕಡ್ಡಾಯ ತಮಿಳು ಶಿಕ್ಷಣ ಕಾಯಿದೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ  ಮುಖ್ಯಮಂತ್ರಿ ಜಯಲಲಿತಾ ಸ್ಪರ್ಧಿಸುತ್ತಿರುವ ಆರ್.ಕೆ.ನಗರ್ ಮತ್ತು ತೆಲುಗು, ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿ ವಾಸವಾಗಿರುವ ಹೊಸೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಪ್ರತಿಭಟಿಸಲು ಮುಂದಾಗಿದ್ದೇನೆ. ಈ ಮೂಲಕ ಭಾಷಾ ಅಲ್ಪ ಸಂಖ್ಯಾತರ ಶಕ್ತಿ ಏನೆಂಬುದನ್ನು ತೋರಿಸಲು ಇಚ್ಚಿಸುತ್ತಿದ್ದೇನೆ. ಈಗಲಾದರೂ ಜಯಲಲಿತಾ ಅವರು ಭಾಷಾ ಅಲ್ಪ ಸಂಖ್ಯಾತರ ಸಮಸ್ಯೆಗಳನ್ನು ಪರಿಹರಿಸುವುದಾಗಿ, ಕಡ್ಡಾಯ ತಮಿಳು ಶಿಕ್ಷಣ ಕಾಯಿದೆಯನ್ನು ರದ್ದು ಗೊಳಿಸುವುದಾಗಿ ಭರವಸೆ ನೀಡಿದರೆ ಚುನಾವಣೆಯಿಂದ ಹಿಂದಕ್ಕೆ ಸರಿದು, ಅವರ ಬೆಂಬಲಕ್ಕೆ ನಿಲ್ಲಲು ಸಿದ್ಧವಾಗಿದ್ದೇನೆ” ಎಂದು  ಜಗದೀಶ್ವರ ರೆಡ್ಡಿ ಹೇಳಿದರು.

ಆರ್.ಕೆ.ನಗರ್ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಲಕ್ಷದಷ್ಟು ತೆಲುಗು, ಮತ್ತಿತರೆ  ಭಾಷೆಗಳನ್ನಾಡುವ ಭಾಷಾ ಅಲ್ಪಸಂಖ್ಯಾತ ಮತದಾರರಿದ್ದಾರೆ. ಹೊಸೂರು ಕ್ಷೇತ್ರದಲ್ಲಿಯೂ ಸುಮಾರು ಶೇಖಡ 50 ರಷ್ಟು ಭಾಷಾ ಅಲ್ಪಸಂಖ್ಯಾತ ಮತದಾರರಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಮತದಾರರಾಗಿರುವ ಕನ್ನಡ, ಮತ್ತಿತರೆ ಭಾಷಾ ಅಲ್ಪ ಸಂಖ್ಯಾತರು ತಮ್ಮನ್ನು ಬೆಂಬಲಿಸಿ, ಮತನೀಡುವುದರ ಮೂಲಕ ಅವರ ಶಕ್ತಿಯನ್ನು ಪ್ರದರ್ಶನ ಮಾಡಬೇಕಾದ ಅಗತ್ಯವಿದೆ. ಆ ಮೂಲಕ ಮುಂದೆಯೂ ಅವರ ಪರವಾಗಿ ಹೋರಾಟ ಮುಂದುವರೆಸುವ ಶಕ್ತಿಯನ್ನು, ಪ್ರೋತ್ಸಾಹವನ್ನು ತಮಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇನ್ನು ಮುಂದೆಯೂ ಯಾವುದೇ ಪಕ್ಷಗಳಾಗಲಿ, ಸರ್ಕಾರಗಳಾಗಲಿ ತಮಿಳುನಾಡು ರಾಜ್ಯದಲ್ಲಿ ಭಾಷಾ ಅಲ್ಪಸಂಖ್ಯಾತರ ವಿರುದ್ಧ ದಬ್ಬಾಳಿಕೆಯನ್ನು ನಡೆಸಿದರೆ ತಾವು ಸುಮ್ಮನೆ ಕೈಕಟ್ಟಿಕೊಂಡು ಕೂರುವುದಿಲ್ಲ ಎಂದು ಹೆಚ್ಚರಿಸಿದ ಅವರು, ಭಾಷಾ ಅಲ್ಪ ಸಂಖ್ಯಾತರ ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮ ಕಒನೆಯ ಉಸಿರು ಇರುವತನಕ ಹೋರಾಟಕ್ಕೆ ಸಿದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.