unnamed (3)
ಬಡ ಜನರು ಹಸಿವೆಯಿಂದ ನರಳಬಾರದು ಎಂಬ ಉದ್ದೇಶದಿಂದ ಮೇ.1ರಿಂದ ಎಲ್ಲ ಬಡ ಕುಟುಂಬಗಳಿಗೆ “ಅನ್ನಭಾಗ್ಯ’ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಿಸಲು ಮುಂದಾಗಿರುವಂತೆಯೇ, ಬಡ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಗಿಯುವ ತಂಬಾಕು ನಿಷೇಧಿಸುವ ಮೂಲಕ ಆರೋಗ್ಯ ಭಾಗ್ಯವನ್ನೂ ಸಹ ಕಲ್ಪಿಸಿಕೊಡಬೇಕು ಎಂದು ಮಾಜಿ ಕಾನೂನು ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಸುರೇಶ್ ಕುಮಾರ್ ರಾಜ್ಯ ಸರ್ಕಾರವನ್ನು ಗುರುವಾರ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಕ್ಯಾನ್ಸರ್ ಪೀಡಿತ ರೋಗಿಗಳ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಆರೋಗ್ಯ ಸಚಿವರು ಕಳೆದ ವರ್ಷ ಬರೆದಿರುವ ಪತ್ರವನ್ನು ಆಧರಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಿಗಿಯುವ ತಂಬಾಕು ನಿಷೇಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಕಳೆದ ನವೆಂಬರ್ ತಿಂಗಳಲ್ಲೇ ಜಿಗಿಯುವ ತಂಬಾಕು ನಿಷೇಧಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಮುಂದಾಗಿದ್ದರು. ಆದರೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಅದನ್ನು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂಬುದು ತಿಳಿಸಿಲ್ಲ. ಈ ವಿಷಯದಲ್ಲಿ ಖಾದರ್ ಅವರ ಕಾಳಜಿಯ ಬಗ್ಗೆ ಮೆಚ್ಚುಗೆ ಇದೆ. ಆದರೆ ಸರ್ಕಾರ ಏಕೆ ಜಿಗಿಯುವ ತಂಬಾಕು ನಿಷೇಧ ವಿಷಯವನ್ನು ಮುಂದೆ ಹಾಕುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಸುಪ್ರೀಂಕೋರ್ಟಿನಲ್ಲಿ ಆ ಬಗ್ಗೆ ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಸಹ ನ್ಯಾಯಾಲಯದ ನೆಪ ಹೇಳಿಕೊಂಡು ನಿಷೇಧ ತೀರ್ಮಾನ ಕೈಗೊಳ್ಳದಿರುವುದರಿಂದ ಸಾವಿರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಖ್ಯಾತ ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್, ಕ್ಯಾನ್ಸರ್ ಪೀಡಿತರಾದ ದುರ್ಗಯ್ಯ, ಸರ್ದಾರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.